– ನಾಗೇಶ ಹೆಗಡೆ
ಮೋದಿಯವರ ಮಾತಿನ ಮೋಡಿಯೇ ಅಂಥದ್ದು. ಆಮಿರ್ ಖಾನ್ ನಿಂದ ಹಿಡಿದು ಚೇತನ್ ಕುಮಾರ್ ವರೆಗೆ ಎಲ್ಲರನ್ನೂ ಸೆಳೆಯುವಂಥದ್ದು. ಆದರೆ ಅವರು ʻಮನ್ ಕಿ ಬಾತ್ ʼನಲ್ಲಿ ಹೇಳುವ ವಚನಾಮೃತಗಳನ್ನು ಅವರ ಅನುಯಾಯಿಗಳೇ ಪಾಲಿಸುತ್ತಿಲ್ಲ ಏಕೆ? ಈ ಕುರಿತು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹಿಂದೀ ಪತ್ರಕರ್ತ ರವೀಶ್ ಕುಮಾರ್ ನೀಡಿದ ಮೂರು ಉದಾಹರಣೆಗಳ ಮುಖ್ಯಾಂಶಗಳು ಇಲ್ಲಿವೆ: ಈ ಮೂರೂ ಕಳೆದ 3-4 ದಿನಗಳ ಸುದ್ದಿಯನ್ನು ಆಧರಿಸಿದ್ದು. ನಾಡಿದ್ದು ಭಾನುವಾರದ 100ನೆಯ ʼಮನ್ ಕಿ ಬಾತ್ʼ ಪ್ರಸಾರವಾಗಲಿದೆ. ಅದಕ್ಕೆ ಸಂಬಂಧಿಸಿ ಮಾತುಗಳು ಇಲ್ಲಿವೆ.
ಉದಾಹರಣೆ 1:
ಮೋದಿಯವರ ʻಮನ್ ಕೀ ಬಾತ್ʼ ಎಂಬ ಮಂಥ್ಲೀ ಭಾಷಣಗಳನ್ನು 23 ಕೋಟಿ ಭಾರತೀಯರು ನಿಯಮಿತ ರೂಪದಲ್ಲಿ ಕೇಳುತ್ತಿದ್ದಾರೆಂದೂ ಕಡೇಪಕ್ಷ 100 ಕೋಟಿ ಜನರು ಒಮ್ಮೆಯಾದರೂ ಕೇಳಿದ್ದಾರೆಂದೂ ಐಐಎಮ್ ರೋಹ್ತಕ್ ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ. ಈ ಅಧ್ಯಯನಕ್ಕೆ ʼಪ್ರಸಾರ್ ಭಾರತಿʼ ಧನಸಹಾಯ ನೀಡಿತ್ತು.
ಈ ಸಮೀಕ್ಷೆಯ ಫಲಿತಾಂಶ/ಮುಖ್ಯಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರೊ. ಧೀರಜ್ ಶರ್ಮಾ ಅವರ ಹಿನ್ನೆಲೆ ನೋಡಿ:
ಇವರು ಐಐಎಮ್ ರೋಹ್ತಕ್ ಸಂಸ್ಥೆಯ ನಿರ್ದೇಶಕರು. ಸ್ವತಃ ಪ್ರಧಾನ ಮಂತ್ರಿಯವರು ಅಧ್ಯಕ್ಷರಾಗಿದ್ದ ಸಮಿತಿಯೇ ಅವರ ನೇಮಕಾತಿ ಮಾಡಿತ್ತು. ಅವರ ಮೇಲೆ ಹಣಕಾಸು ಅಪರಾತಪರಾ, ಲೈಂಗಿಕ ಅನೈತಿಕತೆಯ ಆಪಾದನೆಗಳು ಬಂದವು. ಶರ್ಮಾ ಅವರ ವಿದ್ಯಾರ್ಹತೆ, ಮತ್ತು ನೇಮಕಾತಿಯನ್ನು ಪ್ರಶ್ನಿಸಿ ಪಂಜಾಬ್- ಹರ್ಯಾಣಾ ನ್ಯಾಯಾಲಯದಲ್ಲಿ ಖಟ್ಲೆ ಹೂಡಲಾಗಿತ್ತು.
ಕೇಂದ್ರ ಶಿಕ್ಷಣ ಇಲಾಖೆ ಈತನಿಂದ ಪದವಿ ಸರ್ಟಿಫಿಕೇಟನ್ನು ಪಡೆಯಲು ಮೂರು ವರ್ಷಗಳಿಂದ ಯತ್ನಿಸಿ ಸೋತಿತ್ತು. ಆದರೆ ಮಾಹಿತಿ ಹಕ್ಕು ಕಾಯ್ದೆಯ ಆಧಾರದ ಮೇಲೆ ಪಡೆದ ದಾಖಲೆಗಳ ಪ್ರಕಾರ ಆತ ಎರಡನೇ ದರ್ಜೆಯಲ್ಲಿ ಪದವಿ ಪಾಸಾಗಿದ್ದು ನಿಜವೆಂಬುದು ಗೊತ್ತಾಗಿದೆ.
ಅಂದಮೇಲೆ ನಿರ್ದೇಶಕ ಹುದ್ದೆಗೆ ಅರ್ಹತೆಯೇ ಇರಲಿಲ್ಲವೆಂದಾಯಿತು. ಆದರೂ ಅವರ ಐದು ವರ್ಷಗಳ ಮೊದಲ ಸೇವಾವಧಿ ಮುಗಿದು ಎರಡೆನಯ ಬಾರಿ ಮತ್ತೆ ನಿರ್ದೇಶಕ ಹುದ್ದೆಯಲ್ಲಿ ಮುಂದುವರೆದಿದ್ದಾರೆ.
ಶರ್ಮಾ ನೇಮಕಾತಿ ಅಸಿಂಧುವೆಂದೂ ನಡತೆ ಅನೈತಿಕದ್ದೆಂದೂ ಪ್ರಶ್ನಾರ್ಹವೆಂದೂ, ನಿರ್ದೇಶಕ ಹುದ್ದೆಯಲ್ಲಿರಲು ನಾಲಾಯಕ್ಕೆಂದೂ ಶಿಕ್ಷಣ ಇಲಾಖೆಯೇ ನ್ಯಾಯಾಲಯಕ್ಕೆ ಈಚೆಗಷ್ಟೆ ಹೇಳಿಕೆ ನೀಡಿದೆ. “ರಾಷ್ಟ್ರಮಟ್ಟದ ಶಿಕ್ಷಣಸಂಸ್ಥೆಯ ಪ್ರತಿಷ್ಠೆಯನ್ನು ನೀವು ಮಣ್ಣು ಪಾಲು ಮಾಡಿದಿರಿ, ನಿಮ್ಮ ಡಿಗ್ರಿಯ ವಿವರಗಳನ್ನು ಮುಚ್ಚಿಟ್ಟಿರಿ; ಹುದ್ದೆಯ ದುರುಪಯೋಗ ಮಾಡಿಕೊಂಡಿರಿ. ನಿಮ್ಮ ಮೇಲೆ ಕ್ರಮ ಕೈಗೊಳ್ಳಬಾರದೇಕೆ?ʼ ಎಂದು ಇಲಾಖೆ ಈತನಿಂದ ಸ್ಪಷ್ಟೀಕರಣ ಕೇಳಿತ್ತು.
ಇದೇ ವ್ಯಕ್ತಿ ಮೊನ್ನೆ ಕೇಂದ್ರ ವಾರ್ತಾ ಇಲಾಖೆಯ ಮಾಧ್ಯಮಗೋಷ್ಠಿಯ ವೇದಿಕೆಯಲ್ಲಿ ಕೂತು ʼಮನ್ ಕೀ ಬಾತ್ʼ ಅದೆಷ್ಟು ಜನಪ್ರಿಯವಾಗಿದೆ ಎಂಬುದರ ಸಮೀಕ್ಷಾ ವರದಿಯ ಸಾರಾಂಶವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟರು
“ಮೋದಿಯವರ ಮಾತುಗಳಿಂದಾಗಿ ಭಾರತದ ನಾಗರಿಕರ ನಡವಳಿಕೆಯೂ ಸುಧಾರಿಸಿದೆ ಮತ್ತು ಶೇ. 60 ಜನರು ರಾಷ್ಟ್ರದ ಉನ್ನತಿಗಾಗಿ ಶ್ರಮಿಸುವುದಾಗಿ ಈ ಸಮೀಕ್ಷೆಯಲ್ಲಿ ಹೇಳಿದ್ದಾರೆ” ಎಂತಲೂ ವಿಶ್ಲೇಷಿಸಿದ್ದಾರೆ. ನಡವಳಿಕೆʼ ಸುಧಾರಿಸಿದ್ದನ್ನು ಹೇಗೆ ಪತ್ತೆ ಹಚ್ಚಿದರೊ? ಮೋದಿಯವರ ಮಾತುಗಳು ಈತನ ನಡವಳಿಕೆಯ ಮೇಲೆ ಪ್ರಭಾವ ಬೀರಿದಂತೇನೂ ಕಾಣಲಿಲ್ಲ.
ತನ್ನ ನಡವಳಿಕೆಗೆ ಸ್ಪಷ್ಟೀಕರಣ ನೀಡುವ ಬದಲು ಶಿಕ್ಷಣ ಇಲಾಖೆಯ ವಿರುದ್ಧವೇ ಶರ್ಮಾ ಖಟ್ಲೆ ಹಾಕಿದ್ದಾರೆ. ತನ್ನನ್ನು ನಿರ್ದೇಶಕ ಹುದ್ದೆಯಿಂದ ಕಿತ್ತು ಹಾಕುವಂತಿಲ್ಲವೆಂದು ಹೇಳಿ ನ್ಯಾಯಾಲಯಕ್ಕೆ ಹೋಗಿರುವ ಇದೇ ಮಹಾಶಯ ಹಿಂದೊಮ್ಮೆ ನ್ಯಾಯಾಂಗವನ್ನೇ ಕಿಚಾಯಿಸಿ ಟ್ವೇಟ್ ಮಾಡಿದ್ದ. ಆ ಟ್ವೀಟ್‌ನ ಒಕ್ಕಣೆ ಹೀಗಿದೆ:
“ಆಶ್ಚರ್ಯದ ಸಂಗತಿ ಏನೆಂದರೆ- ಈ ದೇಶದ ನ್ಯಾಯಾಲಯಗಳು ತೀರ್ಪು ಕೊಡುವುದಕ್ಕಿಂತ ಉಪದೇಶ ನೀಡುವ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಿವೆ. ಪ್ರವಚನ ನಿಲ್ಲಿಸಿ” ಎಂಬ ಮಾತನ್ನು ಬಿತ್ತರಿಸಿದ್ದರು!
ಮೋದಿಯವರ ಜನಪ್ರಿಯತೆಯನ್ನು ಅಳೆಯಲೆಂದು ʼಮನ್ ಕಿ ಬಾತ್ʼ ಭಾಷಣವನ್ನು ಆಲಿಸಿದ 5 ಲಕ್ಷ ಜನರ ಶ್ಲಾಘನೀಯ ಪ್ರತಿಕ್ರಿಯೆಗಳನ್ನು ವಿಶ್ಲೇಷಣೆ ಮಾಡಿದ್ದಾಗಿ ಐಐಎಮ್ ಸಮೀಕ್ಷೆ ಹೇಳಿದೆ. ಇರಬಹುದು. ಆದರೆ 2020ರಲ್ಲಿ NEET/JEE ಪರೀಕ್ಷೆಯನ್ನು ಮುಂದೂಡಬೇಕೆಂಬ ಕೂಗು ಎಲ್ಲೆಡೆ ಕೇಳಬರುತ್ತಿದ್ದಾಗ ಆ ಅವಧಿಯಲ್ಲಿ ಬಂದ “ಮನ್ ಕಿ ಬಾತ್” ವಚನಾಮೃತವನ್ನು ಕೇಳಿ ತುಂಬ ಜನ ಕುಪಿತರಾದರು. ಹತ್ತು ಲಕ್ಷಕ್ಕೂ ಹೆಚ್ಚು ಡಿಸ್‌ಲೈಕ್‌ಗಳೂ ಟೀಕೆಗಳೂ ಬಂದವು. ಈಗ ಬಿಜೆಪಿಯ ಸ್ವಂತದ ಯೂಟ್ಯೂಬ್ ಚಾನೆಲ್ ನಲ್ಲಿ ಕಮೆಂಟ್‌ಗಳನ್ನು ಪ್ರಕಟಿಸುವುದನ್ನೇ ಕೈಬಿಡಲಾಗಿದೆ.
ಸಾರ್ವತ್ರಿಕ ಯೂಟ್ಯೂಬ್‌ನಲ್ಲಿ ʻಮನ್‌ಕಿ ಬಾತʼನ್ನು ಕೇಳಿ ಯಾರು ಬೇಕಾದರೂ ಕಮೆಂಟ್ ಮಾಡಬಹುದು. ಇತ್ತೀಚಿನ 99ನೇ ಎಪಿಸೋಡನ್ನು 74 ಸಾವಿರ ಜನರು ನೋಡಿದ್ದಾಗಿ ಅಲ್ಲಿ ದಾಖಲೆ ಇದೆಯಾದರೂ ಕೇವಲ 6 ಕಮೆಂಟ್‌ಗಳು ಬಂದಿವೆ.
ಯೂಟ್ಯೂಬ್ ಚಾನೆಲ್‌ಗಳನ್ನು ಕೋಟಿಗಟ್ಟಲೆ ಜನರು ನೋಡುವುದು ಅಂಥ ಅಸಾಮಾನ್ಯ ಸಂಗತಿಯೇನಲ್ಲ. ನಟ ಭುವನ್ ಬಾಮ್ ಎಂಬಾತನಿಗೆ ಎರಡೂವರೆ ಕೋಟಿ ಚಂದಾದಾರರಿದ್ದಾರೆ. ತನ್ಮಯ್ ಭಟ್‌ಗೆ 128 ಕೋಟಿ, ಧ್ರುವ್ ರಾಠಿಗೆ 149 ಕೋಟಿ, ಆಶಿಶ್ ಚಂಚಲಾನಿ ಎಂಬಾತನಿಗೆ 436 ಕೋಟಿ ವ್ಯೂಸ್ ಸಿಕ್ಕಿವೆ.
ಮೋದಿಯವರ ಮಾತನ್ನು ಜಗತ್ತಿನ ಅತಿ ದೊಡ್ಡ ರೇಡಿಯೊ ಜಾಲವೆನಿಸಿದ ಆಲ್ ಇಂಡಿಯಾ ರೇಡಿಯೊ ಮೂಲಕ ಪ್ರಸಾರ ಮಾಡಲಾಗುತ್ತಿದೆ. 262 ರೇಡಿಯೊ ಕೇಂದ್ರಗಳು 375ಕ್ಕೂ ಹೆಚ್ಚು ಖಾಸಗಿ ಮತ್ತು ಸಮುದಾಯ ರೇಡಿಯೊ ಕೇಂದ್ರಗಳ ಮೂಲಕ 52 ಭಾರತೀಯ ಭಾಷೆಗಳಲ್ಲೇ ಅಲ್ಲದೆ ಹನ್ನೊಂದು ವಿದೇಶೀ ಭಾಷೆಗಳಲ್ಲೂ ಇದು ಪ್ರಸಾರವಾಗುತ್ತಿದೆ. ದೂರದರ್ಶನದ 34 ಕೇಂದ್ರಗಳು ಮತ್ತು ನೂರಕ್ಕೂ ಹೆಚ್ಚು ಖಾಸಗಿ ವಾರ್ತಾ ಚಾನೆಲ್‌ಗಳು ಇದನ್ನು ಪ್ರಸಾರ ಮಾಡುತ್ತಿವೆ. ಆದರೂ ನೀವು ರಸ್ತೆಯ ಬದಿಯ ಶ್ರಮಜೀವಿಗಳನ್ನು ಅಥವಾ ದಾರಿಹೋಕರನ್ನು ವಿಚಾರಿಸಿ ನೋಡಿ, “ಒಂದು ಬಾರಿಯೂ ಮನ್‌ಕಿ ಬಾತನ್ನು ಕೇಳಿಲ್ಲ” ಎನ್ನುವವರು ಸಿಕ್ಕೇ ಸಿಗುತ್ತಾರೆ. ಐಐಎಮ್ ಸಮೀಕ್ಷೆಯ ಪ್ರಕಾರ ಕೇವಲ 4%ರಷ್ಟು ಜನ ಮಾತ್ರ ಅದನ್ನು ಕೇಳಿಲ್ಲ. ಅಂಥವರನ್ನು ಹುಡುಕಿ ಹುಡುಕಿ ಅವರ ಮನೆಗೆ ಹೋಗಿ ಅಲ್ಲಿರುವವರಿಗೆ ಮನ್ ಕೀ ಬಾತನ್ನು ಕೇಳಿಸುವುದು ಒಳ್ಳೆಯದೇನೊ.
ಉದಾಹರಣೆ 2:
ಭಾರತೀಯ ʼಕುಸ್ತಿ ಮಹಾಸಂಘʼದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ ಭೂಷಣ ಶರಣ್ ಸಿಂಗ್ ಎಂಬಾತನ (ಮೂರನೆಯ ಚಿತ್ರ) ಚರಿತ್ರೆ ಇದು. ಆತನ ಮೇಲೆ ಲೈಂಗಿಕ ಕಿರುಕುಳ, ಗೂಂಡಾಗಿರಿ, ಹಣಕಾಸಿನ ಅವ್ಯವಹಾರ ಮತ್ತು ನಿರಂಕುಶ ಮನೋವೃತ್ತಿಯ ಆಪಾದನೆಗಳಿವೆ. ಅವನ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ದಿಲ್ಲಿಯ ಜಂತರ್ ಮಂತರ್ ಮೈದಾನದಲ್ಲಿ ಅಂತಾರಾಷ್ಟ್ರೀಯ ಮೆಡಲ್ ಗಳಿಸಿದ ಕುಸ್ತಿ ಪ್ರವೀಣೆಯರು ಮತ್ತು ಪಟುಗಳು ಈ ಉರಿಬಿಸಿಲಲ್ಲೂ ಕೂತಿದ್ದಾರೆ. ನ್ಯಾಯಾಲಯ ಬಾಗಿಲನ್ನೂ ತಟ್ಟಿದ್ದಾರೆ. ಇಂದು ರಾತ್ರಿ ದೀವಟಿಗೆ ಪ್ರತಿಭಟನೆಯೂ ನಡೆದಿದೆ.
ತಾನು ಗೂಂಡಾ ಹೌದೆಂಬುದಕ್ಕೆ ಬಿಬಿಸಿಂಗ್ ಅನೇಕ ಸಾಕ್ಷ್ಯಗಳನ್ನು ಹಿಂದಿನಿಂದಲೂ ಉದುರಿಸುತ್ತಲೆ ಬಂದಿದ್ದಾನೆ. ಬಾಬ್ರಿ ಮಸೀದಿ ಬೀಳಿಸಿದ ತರುವಾಯ ತನ್ನ ಮೇಲೆಯೇ ಮೊದಲ ಕೇಸು ಬಿತ್ತೆಂದು ಹೆಮ್ಮೆಯಿಂದ ಹೇಳಿಕೊಂಡವ ಈತ. ತಾನು ಇಂಥವನನ್ನು ಕೊಂದಿದ್ದು ಹೌದು ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡವ. (ಆ ಸಂದರ್ಶನ ಕೆಳಗಿನ ವಿಡೋಯದಲ್ಲಿದೆ)
ʼಈ ಕುಸ್ತಿಪಟುಗಳು ಶಕ್ತಿಶಾಲಿಗಳು. ಅವರನ್ನು ನಿಯಂತ್ರಿಸಲು ಅವರಿಗಿಂತ ಶಕ್ತಿಶಾಲಿಯಾದ ನನ್ನಂಥವರೇ ಬೇಕುʼ ಎಂದಿದ್ದಕ್ಕೂ ದಾಖಲೆಗಳಿವೆ . ಮೋದಿಯವರ ಮಾದರಿಯಲ್ಲೇ ತಾನೂ ತನ್ನ ಅನುಯಾಯಿಗಳಿಗಾಗಿ ʼಮನ್ ಕಿ ಬಾತ್ʼ ಆರಂಭಿಸುತ್ತೇನೆ ಎಂದು ಕೂಡ ಹೇಳಿದ್ದು ದಾಖಲಾಗಿದೆ.
ಉದಾಹರಣೆ 3: ಬಾಲೇಶ್ ಧನಖರ್ ಎಂಬಾತನ ಕತೆ ಇನ್ನೊಂದು ತೆರನಾದದ್ದು. ಆತ ‘ಬಿಜೆಪಿಯ ವಿದೇಶೀ ಗೆಳೆಯರ ಬಳಗʼದ (OFBJP) ಆಸ್ಟ್ರೇಲಿಯಾ ಶಾಖೆಯ ಮುಖ್ಯಸ್ಥನಾಗಿದ್ದ. ಸಿಡ್ನಿಯಲ್ಲಿ ವಾಸವಾಗಿರುವ ಈತ ಕೊರಿಯಾ ದೇಶದ ಹುಡುಗಿಯರನ್ನು ಕೆಲಸ ಕೊಡುತ್ತೇನೆಂದು ಸಂದರ್ಶನಕ್ಕೆ ಕರೆಸಿಕೊಂಡು ಅವರಿಗೆ ಅಮಲು ಪದಾರ್ಥ ಕೊಟ್ಟು ನಂತರ ರೇಪ್ ಮಾಡುತ್ತಿದ್ದ, ತನ್ನ ಕೃತ್ಯವನ್ನು ರೆಕಾರ್ಡ್ ಕೂಡ ಮಾಡಿಕೊಳ್ಳುತ್ತಿದ್ದ. ಐವರು ಕೊರಿಯನ್ ಯುವತಿಯರ ಮೇಲೆ ದೌರ್ಜನ್ಯ ನಡೆಸಿದ ಮತ್ತು ಅದಕ್ಕೆ ಸಂಬಂಧಿಸಿ ಇನ್ನೂ 38 ಅಪರಾಧಗಳನ್ನು ಎಸಗಿದ ತಪ್ಪಿಗೆ ಅಲ್ಲಿನ ನ್ಯಾಯಾಲಯ ಧನಖರ್‌ಗೆ ಬೇಡಿ ಹಾಕಿ ಮೊನ್ನೆ ಜೈಲಿಗೆ ಕಳಿಸಿದೆ.
ಈತನೂ ಮೋದಿಯವರ ಜೊತೆ ಹಾಗೂ ಇತರ ಬಿಜೆಪಿ ಮುಖಂಡರ ಜೊತೆ ನಿಂತು ತೆಗೆಸಿಕೊಂಡ (ನಾಲ್ಕನೆಯ ಚಿತ್ರ) ಅದೆಷ್ಟೊ ಚಿತ್ರಗಳು ಇಂಟರ್ನೆಟ್ ನಲ್ಲಿ ಸಿಗುತ್ತವೆ. ಧನಖರ್ ಕಾನೂನಿನ ಬಲೆಗೆ ಬಿದ್ದನೆಂಬುದು ಗೊತ್ತಾದ ತಕ್ಷಣ OFBJPಯ ಆಸ್ಟ್ರೇಲಿಯಾ ಶಾಖೆ ಟ್ವೀಟ್ ಮಾಡಿ ಈತ 2018ರಲ್ಲೇ ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಟ್ಟಿದ್ದಾನೆಂದೂ ಆತನ ಕರಾಳ ಕೃತ್ಯಗಳು ಅಕ್ಷಮ್ಯವೆಂದೂ ಕಾನೂನಿನ ಉಗ್ರ ಕ್ರಮಗಳನ್ನು ಆತ ಎದುರಿಸಲೇಬೇಕೆಂದೂ ಟ್ವೀಟ್ ಮಾಡಿದೆ.
ಯುವತಿಯರ ಲೈಂಗಿಕ ಶೋಷಣೆ ಮಾಡುವುದು ಅಕ್ಷಮ್ಯವೆಂದು ಬಿಜೆಪಿಗೆ ನಿಜಕ್ಕೂ ಅನ್ನಿಸಿದ್ದರೆ, ಬೃಜ್ ಭೂಷಣ್ ಸಿಂಗ್ ಕೂಡ ಕಾನೂನಿಕ ಕ್ರಮವನ್ನು ಎದುರಿಸಬೇಕೆಂದು ಬಿಜೆಪಿ ಟ್ವೀಟ್ ಏಕೆ ಮಾಡುತ್ತಿಲ್ಲ?
ಡಿಗ್ರಿ ಸರ್ಟಿಫಿಕೇಟ್‌ಗಳನ್ನು ಮುಚ್ಚಿಡುವುದು ಸರಿಯಲ್ಲವೆಂಬ ಶಿಕ್ಷಣ ಇಲಾಖೆಯ ಮಾತುಗಳನ್ನು ಮೋದಿಯವರವರೆಗೆ ಬಿಜೆಪಿ ಕೊಂಡೊಯ್ಯಬಹುದೆ?
ಅಧಿಕಾರಸ್ಥರಿಂದ ಶೋಷಣೆಗೊಳಗಾಗುವ ʼಹೆಣ್ಣುಮಕ್ಕಳ ಮನ್ ಕಿ ಬಾತ್ʼ ಏನೆಂದು ದಿಲ್ಲಿಯಲ್ಲಿರುವ ಯಾರಾದರೂ ಮೋದಿಯವರ ಕಿವಿಗೆ ಹಾಕಬಹುದೆ?
ಮೋದಿಯವರು ತಮ್ಮ 100ನೇ ಮನ್ ಕಿ ಬಾತ್‌ನಲ್ಲಿ ಈ ವಿಷಯದ ಬಗ್ಗೆ ಬೆಳಕು ಚೆಲ್ಲಬಹುದೆ?
ಮಾತಿನ ಮೋಡಿಗಾರ ಅವರು!