-ರಹಮತ್ ತರೀಕೆರೆ
ದೆಹಲಿ ವಿಶ್ವವಿದ್ಯಾಲಯದ ಪ್ರಿನ್ಸಿಪಾಲೆಯು ಕ್ಲಾಸ್ ರೂಮಿನ ಗೋಡೆಗೆ ಸಗಣಿ ಬಳಿದಿದ್ದಕ್ಕೆ ‘ಲೇಪಿಸಿದ್ದರು’ ಎಂಬ ಪದವನ್ನೂ, ಅದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಪ್ರಿನ್ಸಿಪಾಲೆಯ ಮನೆಯ ಗೋಡೆಗೆ ಸಗಣಿ ಬಳಿದಿದ್ದಕ್ಕೆ ‘ವಿರೂಪಗೊಳಿಸಿದರು’ ಎಂಬ ಪದವನ್ನೂ ಕನ್ನಡ ಪತ್ರಿಕೆಗಳು ಬಳಸಿವೆ.
ಒಂದೇ ಕ್ರಿಯೆಯನ್ನು ‘ಲೇಪ’ ಶಬ್ದವು ಪವಿತ್ರೀಕರಿಸುತ್ತಿದ್ದರೆ, ‘ವಿರೂಪ’ ಶಬ್ದವು ದುರುಳೀಕರಿಸುತ್ತಿದೆ. ಭಾಷೆಯ ರಾಜಕಾರಣವಿದು. ನುಡಿಯ ಈ ರಾಜಕಾರಣವು, ಇತಿಹಾಸ ಬರವಣಿಗೆಯಿಂದ ಹಿಡಿದು ಮಾಧ್ಯಮ ವರದಿಗಳವರೆಗೆ, ನಾವು ಮತ್ತೊಬ್ಬರ ಜತೆ ನಿತ್ಯ ಬದುಕಿನಲ್ಲಿ ಮಾಡುವ ಮಾತುಕತೆಯ ತನಕ ಸುಪ್ತವಾಗಿ ವ್ಯಾಪಿಸಿದೆ. ಲಿಂಗ ವರ್ಗ ಜಾತಿ ಧರ್ಮ ಬಣ್ಣ ಸಿದ್ಧಾಂತದ ಆಧಾರದಲ್ಲಿ ಮಾಡಲಾಗುವ ತರತಮಗಳು ಸಾಂಸ್ಥೀಕರಣ ಮತ್ತು ಸಹಜೀಕರಣ ಪಡೆದಿರುವ ಸಮಾಜದಲ್ಲಿ, ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ; ಅಧಿಕಾರಸ್ಥ ವರ್ಗಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಜನಾಭಿಪ್ರಾಯ ರೂಪಿಸುವ ಪ್ರಬಲ ಆಯುಧ ಕೂಡ.
ಕನ್ನಡದ ಖ್ಯಾತ ಸಂಶೋಧಕರೊಬ್ಬರ ಬರೆಹವೊಂದು ಹೀಗೆ ಆರಂಭವಾಗುತ್ತದೆ. “ಆರ್ಯರ ಆಗಮನ, ಮುಸ್ಲಿಮರ ಆಕ್ರಮಣ, ಬ್ರಿಟಿಶರ ಪ್ರವೇಶ”. ‘ಆಗಮನ’ದಲ್ಲಿ ಸ್ವಾಗತ ಭಾವವಿದೆ. ‘ಪ್ರವೇಶ’ದಲ್ಲಿ ನಿರ್ಲಿಪ್ತ ನಿಲುವಿದೆ. ‘ಆಕ್ರಮಣ’ದಲ್ಲಿ ದೂಷಣೆಯಿದೆ. ಬಳಸುವ ಶಬ್ದದಲ್ಲೇ ಮೌಲ್ಯ-ಅಪಮೌಲ್ಯ ತುಂಬುವ ಈ ಭಾಷೆಯನ್ನು ವ್ಯಾಲ್ಯೂ ಲೋಡೆಡ್ ಲಾಂಗ್ವೇಜ್ ಎಂದು ಕರೆಯಲಾಗುತ್ತದೆ.
ಈ ಭಾಷಾಬಳಕೆಯಿಂದ ಒಂದೇ ಕೃತ್ಯವು ಮಾಡಿದವರ ಧರ್ಮ ವರ್ಗ ಜಾತಿಗಳ ಆಧಾರದಲ್ಲಿ ‘ಕ್ರೌರ್ಯ’ ಅಥವಾ ‘ಶೌರ್ಯ’ ಆಗಬಲ್ಲದು; ಒಂದೇ ಯುದ್ಧವು, ಮಾಡುವವರ ಸಾಮಾಜಿಕ ಧಾರ್ಮಿಕ ಹಿನ್ನೆಲೆಯ ಮೇಲೆ ‘ರಾಜ್ಯವಿಸ್ತರಣೆ’ ಇಲ್ಲವೇ ‘ದುರಾಕ್ರಮಣ’ ಆಗಬಲ್ಲದು; ಒಂದೇ ಸಾವು ಸತ್ತವರ ಹಿನ್ನೆಲೆಯ ಆಧಾರದಲ್ಲಿ ‘ಸತ್ತರು’ ಅಥವಾ ‘ಹುತಾತ್ಮರಾದರು’ ಆಗಬಲ್ಲದು.
ನಿರ್ದಿಷ್ಟ ಕೃತ್ಯ ಎಸಗಿದವರಿಗೆ ಏಕವಚನ ಬಹುವಚನ ಬಳಸಿಯೂ ಆ ಕೃತ್ಯದ ಅರ್ಥವನ್ನೇ ಬದಲಿಸಬಹುದು.
ಇತಿಹಾಸ ಬರವಣಿಗೆಯನ್ನು ನಾವು ಅದರ ಕಂಟೆಂಟ್ ಮೂಲಕ ಓದುತ್ತೇವೆ. ಅದಕ್ಕೆ ಬಳಕೆಯಾದ ಭಾಷೆಯ (ರೂಪ/ಫಾರ್ಮ್) ಮೂಲಕ ಕೂಡ ಓದಬೇಕು. ದೃಶ್ಯಮಾಧ್ಯಮಗಳಲ್ಲಿ ಆಂಕರುಗಳ ಭಾಷೆ ಮಾತ್ರವಲ್ಲ, ಬಾಡಿಲಾಂಗ್ವೇಜ್ ಕೂಡ ಅರ್ಥವನ್ನು ಹುಟ್ಟಿಸುತ್ತಿರುತ್ತದೆ. ಲಾಂಗ್ವೇಜ್ ಆಂಡ್ ನೆರೇಟೀವ್ಸ್ ಆರ್ ಡೀಪ್ ಪಾಲಿಟಿಕ್ಸ್. ನಮ್ಮ ದೇಶದಲ್ಲಿ ವ್ಯಕ್ತಿಯನ್ನೊ ಸಮುದಾಯವನ್ನೊ ದುಷ್ಟೀಕರಿಸಲು ಅಥವಾ ವೈಭವೀಕರಿಸಲು, ಅಮಾನುಷಗೊಳಿಸಲು ಇಲ್ಲವೇ ಮಾನುಷಗೊಳಿಸಲು ಭಾಷೆ ಬಳಕೆಯಾಗುತ್ತದೆ. ಕೊಲ್ಲಲು ಖಡ್ಗವೇ ಬೇಕೆಂದಿಲ್ಲ. ಭಾಷೆಯೊಂದೇ ಸಾಕು.