ಜಾಲಹಳ್ಳಿ: ಇಂದು ಜಾಲಹಳ್ಳಿ ಸಮೀಪದ ಅಮರಪುರ ಕ್ರಾಸ್ ಬಳಿ ರೈತರು ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 20ರವರೆಗೆ ನೀರು ಹರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೀರು ಬಳಕೆದಾರರ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಗುರುವಾರ ಜಾಲಹಳ್ಳಿಗೆ ಸಮೀಪದ ಅಮರಪುರ ಕ್ರಾಸ್ ಬಳಿ ತಿಂಥಣಿ ಬ್ರಿಜ್- ಕಲ್ಮಾಲ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಎರಡು ತಾಸು ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಇದನ್ನು ಓದಿ:ಮನೆ ಕೇಳಲು ಬಂದ ಮಹಿಳೆಗೆ ಗ್ರಾಮ ಪಂಚಾಯಿತಿ ಸದಸ್ಯನಿಂದ ಲೈಂಗಿಕ ಕಿರುಕುಳ
ಸಂಘಟನೆಯ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ‘ಹಿಂಗಾರು ಬೆಳೆ ರೈತರ ಕೈಸೇರಬೇಕಾದರೆ ಕನಿಷ್ಠ ಮುಂದಿನ 45 ದಿನಗಳ ಕಾಲ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದರೆ ರೈತರು ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ. ಇದೇ ತಿಂಗಳ 23ಕ್ಕೆ ಕಾಲುವೆ ನೀರು ಸ್ಥಗಿತಗೊಳಿಸಿದರೆ ಸದ್ಯ ನೀರಾವರಿ ವ್ಯಾಪ್ತಿಯಲ್ಲಿರುವ ಬೆಳೆದಿರುವ ಬೆಳೆ ಸಂಪೂರ್ಣವಾಗಿ ಹಾಳಾಗುತ್ತದೆ. ನೀರಾವರಿ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಈಗಾಗಲೇ ಕಾಲುವೆಗಳ ನವೀಕರಣ ಕಾಮಗಾರಿಗೆ ಸುಮಾರು ₹2,700 ವೆಚ್ಚ ಮಾಡಿದ್ದರೂ ಬಹುತೇಕ ಕಾಲುವೆಗಳಿಗೆ ಗೇಟ್ ನಿರ್ಮಿಸಿಲ್ಲ. ಕೆಲವು ಕಾಲುವೆಗಳಲ್ಲಿ ಸರಿಯಾಗಿ ನವೀಕರಣ ಕಾಮಗಾರಿಯೇ ಪೂರ್ಣಗೊಳಿಸಿಲ್ಲ’ ಎಂದು ಅವರು ಆರೋಪಿಸಿದರು
ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಕಾರ್ಯ ಪಾಲಕ ಎಂಜಿನಿಯರ್ ರಮೇಶ ರಾಠೋಡ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದರು.
ಇದನ್ನು ಓದಿ;ಪೊಲೀಸ್ ಮೇಲೆ ಹಲ್ಲೆ ನಡೆದ ಬಳಿಕವೂ ನಿಲ್ಲದ ಅಕ್ರಮ ಮರಳುಗಾರಿಕೆ: ಎಗ್ಗಿಲ್ಲದೆ ನಿತ್ಯ ಮರಳು ಸಾಗಣೆ
‘ಶುಕ್ರವಾರ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ಭಾಗದ ಸ್ಥಿತಿಗತಿಯನ್ನು ಗಮನಕ್ಕೆ ತರಲಾಗುವುದು. ರೈತರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ತಕ್ಷಣವೇ ಪೊಲೀಸರು ಮಧ್ಯ ಪ್ರವೇಶ ಮಾಡಿ, ‘ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆಯಾಗಿದೆ’ ಎಂದು ಹೇಳಿ ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಸಿಪಿಐ ಗುಂಡುರಾವ್, ಹಟ್ಟಿ ಪಿಐ ಕೊಸಕೇರಪ್ಪ, ಪಿಎಸ್ಐ ವೈಶಾಲಿ ಝಳಕಿ ಸೂಕ್ತ ಪೊಲೀಸ್ ಬಂದೋಬಸ್ತ್ ವಹಿಸಿದ್ದರು.