ಮೈಸೂರು: ಕೋವಿಡ್–19 ರೋಗದ ಪರೀಕ್ಷೆ ಮನೆಯಲ್ಲೇ ಮಾಡಿಕೊಳ್ಳಲು ಸಾಧ್ಯವಿರುವಂತಹ ಸಾಧನವನ್ನು ಮೈಸೂರು ವಿಶ್ವವಿದ್ಯಾಲಯ ಸಿದ್ಧಪಡಿಸಿದ್ದು, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ನೇತೃತ್ವದಲ್ಲಿ ರ‍್ಯಾಪಿಡ್ ಡಿಟೆಕ್ಷನ್ ಟೆಸ್ಟ್ ಕಿಟ್ ಅನ್ನು ತಯಾರಿಸಲಾಗಿದೆ.
ʻನಾವು ಇದುವರೆಗೆ ನೂರಾರು ಮಂದಿ ಮೇಲೆ ಪ್ರಯೋಗ ನಡೆಸಿದ್ದೇವೆ. ಕೊರೊನಾ ಸೋಂಕು ಪತ್ತೆ ಹಚ್ಚುವಲ್ಲಿ ಶೇಕಡಾ 90ರಷ್ಟು ಯಶಸ್ಸು ಲಭಿಸಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಕಳುಹಿಸುತ್ತಿದ್ದು, ಅನುಮೋದನೆ ದೊರೆತ ತಕ್ಷಣವೇ ಮಾರುಕಟ್ಟೆಗೆ ಬಿಡಲಾಗುವುದು. ಇದು ₹ 100 ದರದಲ್ಲಿ ಸಿಗುವಂತೆ ನೋಡಿಕೊಳ್ಳಲಾಗುವುದುʼ ಎಂದು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರು ಹೇಳಿದರು.
ಇದನ್ನು ಓದಿ: ಹ್ರಾಂ ಹ್ರೂಂ ವಿಜ್ಞಾನ ಮತ್ತು ಹ್ರಾಂ ಹ್ರೂಂ ಅರ್ಥಶಾಸ್ತ್ರ
ಹೈದರಾಬಾದ್‌ನ ಲಾರ್ವೆನ್ ಬಯೋಲಾಜಿಕ್ಸ್ ಕಂಪನಿ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಮೂವರು ವಿಜ್ಞಾನಿಗಳು ಈ ಕಿಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ವಿಜ್ಞಾನ ಭವನದ ಸಂಚಾಲಕ ಪ್ರೊ.ಎಸ್.ಚಂದ್ರ ನಾಯಕ್ ಹಾಗೂ ಅಣುಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ.ಮೋಹನ್ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ವಿನ್ಯಾಸಗೊಳಿಸಿರುವ ನಮ್ಮ ಈ ಸಾಧನವನ್ನು ಬಳಸಿ ಗಂಟಲು, ಮೂಗಿನ ದ್ರವವನ್ನು ತೆಗೆದು ಮನೆಯಲ್ಲೇ ಪರೀಕ್ಷೆ ಮಾಡಬಹುದಾಗಿದೆ. 10 ನಿಮಿಷಗಳಲ್ಲಿ ಫಲಿತಾಂಶ ಬರಲಿದೆ. ಸದ್ಯ ಆರ್‌ಟಿಪಿಸಿಆರ್, ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಸೇರಿದಂತೆ ಕೋವಿಡ್ ಪರೀಕ್ಷೆಗೆ ಬಳಸುತ್ತಿರುವ ಸಾಧನಗಳ ಮೂಲಕ ಶೇ 40 ರಿಂದ 60 ರಷ್ಟು ಖಚಿತ ಫಲಿತಾಂಶ ದೊರಕುತ್ತಿದೆ’ ಎಂದು ಮಾಹಿತಿ ನೀಡಿದರು.
‘ಹೈದರಾಬಾದ್‌ನ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ ಹಾಗೂ ಲಖನೌದ ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯ ಜೊತೆಗೂಡಿ ಕೋವಿಡ್‌ಗೆ ಔಷಧಿ ಕೂಡ ಅಭಿವೃದ್ಧಿಪಡಿಸುತ್ತಿದ್ದೇವೆ. ಕ್ಲಿನಿಕಲ್ ಟ್ರಯಲ್ ನಡೆಯಬೇಕಿದೆ. ಹಣ ನೀಡಿದರೆ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಲೂ ಸಿದ್ಧ’ ಎಂದು ಪ್ರೊ.ರಂಗಪ್ಪ ತಿಳಿಸಿದರು.
ಕುಲಪತಿ ಪ್ರೊ.ಹೇಮಂತಕುಮಾರ್ ಮಾತನಾಡಿ, ‘ಕೋವಿಡ್ ನಿಯಂತ್ರಣ ವಿಚಾರದಲ್ಲಿ ಮೈಸೂರು ವಿಶ್ವವಿದ್ಯಾಲಯ ಕೂಡ ಕೈಜೋಡಿಸಿದೆ. ಕಿಟ್ ಅಭಿವೃದ್ಧಿಪಡಿಸಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಚಾರ’ ಎಂದರು.
ಹೋಂ ಕೋವಿಡ್ ಟೆಸ್ಟಿಂಗ್‌ನ ವಿಶೇಷತೆಗಳು
ರೋಗದ ಲಕ್ಷಣ ಹೊಂದಿರೋ ವ್ಯಕ್ತಿಯ ಕಫ, ಮೂಗಿನ ಸ್ರವಿಸುವಿಕೆ , ಲಾಲಾರಸ ಸೇರಿದಂತೆ ಇತರೆ ದ್ರವಗಳನ್ನ ಕೋವಿಡ್ ವೈರಸ್ ಪತ್ತೆ ಮಾಡಲು ಬಳಸಬಹುದು.
ಈ ಕಿಟ್ ಅಭಿವೃದ್ಧಿಪಡಿಸಲು ಅಣುಜೀವ ವಿಜ್ಞಾನ, ನ್ಯಾನೋ ತಂತ್ರಜ್ಞಾನ ಮತ್ತು ಕೃತಕ ಬುದ್ದಿವಂತಿಕೆ ಸಂಬಂಧಿಸಿದ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.
ಕೇವಲ 100 ರೂಪಾಯಿಗೆ ಕಿಟ್ ದೊರೆಯುವಂತೆ ಅಭಿವೃದ್ಧಿಪಡಿಸಲಾಗಿದೆ.
ಸದ್ಯ ಮೈಸೂರು ವಿವಿ ಈ ಕಿಟ್ಗೆ ಅನುಮೋದನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಕಳುಹಿಸಿದೆ.
ಐಸಿಎಂಆರ್ ನಿಂದ ಅನುಮೋದನೆ ಸಿಗುವ ವಿಶ್ವಾಸ ಇದೆ. ಅನುಮೊದನೆ ದೊರೆತರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ 100 ಕಿಟ್ಗಳನ್ನೂ ಪರೀಕ್ಷೆಗೆ ಒಳಪಡಿಸಿದ್ದು, 90 ರಷ್ಟು ಫಲಿತಾಂಶ ಸಿಕ್ಕಿದೆ.