ಕುಡಿಯುವ ನೀರು ಸರಬರಾಜು ಖಾಸಗೀಕರಣ: ಅವಳಿ ನಗರದಲ್ಲಿ 15 ದಿನದಿಂದ ನೀರಿಗಾಗಿ ಹಾಹಕಾರ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ನಗರವನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕೋಟಿಗಟ್ಟಲೆ ಅನುದಾನಗಳು ಬಿಡುಗಡೆಯಾಗುತ್ತಿದ್ದರೂ ಸಹ ಜನರ ಬವಣೆ ಮಾತ್ರ ಮತ್ತಷ್ಟು ಕಷ್ಟಕ್ಕೆ ದೂಡಲಾಗುತ್ತಿದೆ. ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಹಣ ನೀಡಿದರೂ ಕುಡಿಯುವ ನೀರು ಇಲ್ಲವಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿದೇಶಿ ಕಂಪನಿಗಳಿಗೆ ಟೆಂಡರ್ ನೀಡಲಾಗುತ್ತಿದೆ. ಹೀಗಿದ್ದರೂ ಜನರ ನೆಮ್ಮದಿಯಿಂದ ಜೀವನ ನಡೆಸಲು ಆಗುತ್ತಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜನರು ಕುಡಿಯುವ ನೀರಿಗಾಗಿ ದಿನವೂ ಹೋರಾಟ ನಡೆಸುವಂತಾಗಿದೆ.

ಜಲಮಂಡಳಿಯಿಂದ ನೀರು ಸರಬರಾಜು ಜವಾಬ್ದಾರಿಯನ್ನು ಖಾಸಗೀಕರಣದ ಮೂಲಕ ಎಲ್ ಆ್ಯಂಡ್ ಟಿ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ. ಕುಡಿಯುವ ನೀರಿನ ಜವಾಬ್ದಾರಿ ಸಂಪೂರ್ಣ ಖಾಸಗೀಕರಗೊಂಡಿದ್ದರಿಂದ ಜಲಮಂಡಳಿ ಸಿಬ್ಬಂದಿ ಮತ್ತು ಎಲ್ ಆ್ಯಂಡ್ ಟಿ ಕಂಪನಿ ನಡುವೆ ತಿಕ್ಕಾಟದಿಂದಾಗಿ ಜನರು ಹೈರಾಣಾಗಿದ್ದು,15 ದಿನಗಳಿಂದ ಕುಡಿಯುವ ನೀರಿಗಾಗಿ  ಪರದಾಡುವಂತಾಗಿದೆ.

ಕುಡಿಯುವ ನೀರಿನ ಸರಬರಾಜು ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ನೀಡಲಾದ ಜವಾಬ್ದಾರಿ ಬಗ್ಗೆ ಮೊದಲಿಂದಲೂ ವಿರೋಧಿಸುತ್ತಿರುವ ಜಲ ಮಂಡಳಿ ಸಿಬ್ಬಂದಿಗಳು. ಇದೀಗ ಸರ್ಕಾರ ಮತ್ತು ಕಂಪನಿ ನಡುವೆ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಜನರು ಆಕ್ರೋಶಗೊಂಡಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಅಯೋಧ್ಯಾ ನಗರ, ಎಸ್‌.ಎಂ. ಕೃಷ್ಣ ನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ, ಹೊಸುರು, ವಿದ್ಯಾನಗರ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಅವಳಿನಗರದ ಬಹುತೇಕ ಕಡೆಯಲ್ಲಿ ಸುಮಾರು 15 ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ಅಲ್ಲದೇ ಉಣಕಲ್ ಗ್ರಾಮದ ವೀರಭದ್ರೇಶ್ವರ ಕಾಲೋನಿಯಲ್ಲಿ ನೀರು ಸರಬರಾಜು ಮಾಡುವ ಸಂಚಾರಿ ವಾಹನಗಳು ಬರದೇ ಇದ್ದರೆ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಇನ್ನು ದುಬಾರಿ ಹಣ ತೆತ್ತು ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೋಡಲ್ ಅಧಿಕಾರಿಗಳ ನೇಮಕ

ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿಯ ಸಹಾಯಕ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಮೇಯರ್ ವಿರೇಶ ಅಂಚಟಗೇರಿ  ಹೇಳಿದ್ದಾರೆ.

ಅಧಿಕಾರಿಗಳ ಮಟ್ಟದಲ್ಲಿ ಸಭೆಗಳು ನಡೆದಿದ್ದು, ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ ಎರಡು ತಿಂಗಳುಗಳಿಂದ ಆಗುತ್ತಿದೆ. ಸಾಕಷ್ಟು ಪ್ರದೇಶಗಳಲ್ಲಿ ನೀರಿನ ಸರಬರಾಜು ಆಗುತಿಲ್ಲ. ಆದ್ದರಿಂದ ಮೇಲಿಂದ ಮೇಲೆ ‌ಜನರು ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ಎದುರಿಸುತಿದ್ದಾರೆ. ಜಲಮಂಡಳಿಯಿಂದ ಎಲ್ ಮತ್ತು ಟಿ ಕಂಪನಿಗೆ ನೀರು ಸರಬರಾಜು ಮಾಡುವ ಹೊಣೆಯನ್ನು ನೀಡಲಾಗಿದೆ. ಆದರೆ ಎಲ್ ಮತ್ತು ಟಿ ಕಂಪನಿಯವರು ಸರಿಯಾದ ರೀತಿಯಲ್ಲಿ ನೀರನ್ನು ಸರಬರಾಜು ಮಾಡುತಿಲ್ಲ. ಅಲ್ಲದೆ, ಜಲಮಂಡಳಿಯಲ್ಲಿನ ಮಾಡುತ್ತಿರುವ ಕೆಲವು ಸಿಬ್ಬಂದಿಗಳು ಕೆಲಸಕ್ಕೆ ಬರುತಿಲ್ಲ ಆದ್ದರಿಂದ ಸರಿಯಾಗಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *