ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಸರ್ಕಾರವನ್ನು ನಡೆಸಲು ವಿಶೇಷ ವ್ಯವಸ್ಥೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್; 1 ಲಕ್ಷ ರೂಪಾಯಿ ದಂಡ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಸರ್ಕಾರವನ್ನು ನಡೆಸಲು ವಿಶೇಷ ವ್ಯವಸ್ಥೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಜೊತೆಗೆ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ಸುದ್ದಿಗಳ ಪ್ರಸಾರವಾಗುವುದನ್ನ ನಿಷೇಧಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.

ನ್ಯಾಯಾಲಯವು ಈ ಪಿಐಎಲ್ ಅನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ವಕೀಲರಾದ ಶ್ರೀಕಾಂತ್ ಪ್ರಸಾದ್ ಎಬುವವರು ದೆಹಲಿ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು. ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಸರ್ಕಾರ ನಡೆಸಲು ವಿಶೇಷ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕೇಜ್ರಿವಾಲ್ ಶಾಸಕರು ಮತ್ತು ಸಚಿವ ಸಂಪುಟದ ಸದಸ್ಯರೊಂದಿಗೆ ಮಾತನಾಡಲು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲು ಜೈಲಿನ ಡಿಜಿಗೆ ಆದೇಶಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು.

ಇದನ್ನು ಓದಿ : ಸಂಪೂರ್ಣ ಬತ್ತಿಹೋದ 400 ಎಕರೆ ಬೃಹತ್ ಕೆರೆ; ಲಕ್ಷಾಂತರ ಮೀನುಗಳು ಸಾವು

ಆದರೆ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿ ದೆ. ಅಲ್ಲದೆ ಈ ವಕೀಲನಿಗೆ ಒಂದು ಲಕ್ಷ ದಂಡ ವಿಧಿಸಿದ್ದು, AIIMS ಖಾತೆಗೆ ಜಮಾ ಮಾಡುವಂತೆ ಅರ್ಜಿದಾರರಿಗೆ ಆದೇಶಿಸಿದೆ. ಅಸಂಬದ್ಧ ಪಿಐಎಲ್​ ಸಲ್ಲಿಸಿದ ವಕೀಲನಿಗೆ ನ್ಯಾಯಾಲಯವು ಛೀಮಾರಿ ಹಾಕಿದೆ.

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಮತ್ತು ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಶ್ರೀಕಾಂತ್ ಪ್ರಸಾದ್ ಮನವಿಯಲ್ಲಿ ಒತ್ತಾಯಿಸಿದ್ದರು. ಈ ಮನವಿಗೆ ನ್ಯಾಯಾಲಯ ತೀವ್ರ ಅಸಹನೆ ವ್ಯಕ್ತಪಡಿಸಿ ತುರ್ತು ಪರಿಸ್ಥಿತಿ ಹೇರಬೇಕೇ ಅಥವಾ ಸೇನಾ ಆಡಳಿತ ಹೇರಬೇಕಾ? ಎಂದು ಅಸಮಧಾನ ವ್ಯಕ್ತಪಡಿಸಿತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾರ್ಚ್ 21 ರಿಂದ ಜೈಲಿನಲ್ಲಿದ್ದಾರೆ. ಅಬಕಾರಿ ಹಗರಣದಲ್ಲಿ ಬಂಧಿತರಾಗಿರುವ ಕೇಜ್ರಿವಾಲ್ ಜೈಲಿನಿಂದ ಸರ್ಕಾರವನ್ನು ನಡೆಸಲು ನಿರ್ಧರಿಸಿದ್ದಾರೆ. ಆಮ್ ಆದ್ಮಿ ಪಕ್ಷವು ತನ್ನ ನಾಯಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಮತ್ತು ಜೈಲಿನಿಂದ ಸರ್ಕಾರವನ್ನು ನಡೆಸುತ್ತದೆ ಎಂದು ಹೇಳುತ್ತಿದೆ.

ಇದನ್ನು ನೋಡಿ : ಕಲಬುರ್ಗಿ ಲೋಕಸಭಾ ಕ್ಷೇತ್ರ : ಖರ್ಗೆ ವರ್ಚಸ್ಸಿನ ಮುಂದೆ ಮಂಕಾದ ಮೋದಿ ಗ್ಯಾರಂಟಿ Janashakthi Media

Donate Janashakthi Media

Leave a Reply

Your email address will not be published. Required fields are marked *