ಬಿಜೆಪಿ ರಾಜ್ಯಾಧ್ಯಕ್ಷತೆ ಎಂಬ ಡಿಪ್ ಟೆಸ್ಟ್

ರಾಜಾರಾಂ ತಲ್ಲೂರು

ಪಕ್ಷದಲ್ಲಿ ಹೈಕಮಾಂಡ್ ಬಲಿಷ್ಠ ಆಗಿರುವಾಗ ಅವರಿಗೆ ತಮ್ಮ ಪ್ರಯೋಗಗಳನ್ನು ನಡೆಸುವ ಆಯ್ಕೆಗೆ ಅವಕಾಶಗಳಿರುತ್ತವೆ. ಆದರೆ, ಹೈಕಮಾಂಡ್‌ಗೆ ತನ್ನ ಶಕ್ತಿಯ ಬಗ್ಗೆ ಸಂಶಯ ಇದ್ದಾಗ, “ಅನಿವಾರ್ಯ ಆಯ್ಕೆ”ಗಳತ್ತ ಅವರ ದೃಷ್ಟಿ ಹೊರಳುತ್ತದೆ ಎಂಬುದು ವಿಜಯೇಂದ್ರ ಅವರ ಆಯ್ಕೆಯಿಂದ ಖಚಿತವಾದಂತೆ ಕಾಣಿಸುತ್ತಿದೆ. ಹಾಗಾಗಿ ಇದು ಬಿಜೆಪಿ ಹೈಕಮಾಂಡಿಗೆ ಕರ್ನಾಟಕದಲ್ಲಿ ಡಿಪ್‌ಟೆಸ್ಟ್. 

ಬಿಜೆಪಿಗೆ ಹೊಸ ತಲೆಮಾರಿನ ಎಳೆಯ ಅಧ್ಯಕ್ಷರು ಬಂದಿದ್ದಾರೆ. ಇತ್ತೀಚೆಗಿನ ಚುನಾವಣೆ ಸೋಲು ಮತ್ತು ಆ ಬಳಿಕದ ದಿಶಾಹೀನ ಸ್ಥಿತಿಯಿಂದ ಹೊರಬಂದಿರುವ ನಿಟ್ಟುಸಿರು, ಈ “ವಿಳಂಬಿತ ತಾಲ್” ಬೆಳವಣಿಗೆಯ ಕುರಿತು ಪಕ್ಷದೊಳಗಿನ ಪ್ರತಿಕ್ರಿಯೆಗಳಲ್ಲಿ ಕಾಣಿಸುತ್ತಿದೆ. ಅವರ ಪರ ಇರುವ ಬಹುತೇಕ ಮಾಧ್ಯಮಗಳಂತೂ ಇಂದಿನ ತಮ್ಮ ಪುಟಗಳಲ್ಲಿ “ಹಸಿರು ಪಠಾಕಿ” ಸಿಡಿಸಿ ಸಂಭ್ರಮಿಸಿದ್ದು ಕೂಡ ಎದ್ದು ಕಾಣಿಸಿದೆ.

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಆಯ್ಕೆಯಿಂದ ಇನ್ನು ಬಿಜೆಪಿಗೆ “ವಂಶಪಾರಂಪರ್ಯದ ಪಕ್ಷ” ಎಂದು ತಮ್ಮನ್ನು ಟೀಕಿಸುವ ಅರ್ಹತೆ ಇಲ್ಲ ಎಂದು, ಕಾಂಗ್ರೆಸ್ ಕೂಡ ನಿಟ್ಟುಸಿರುಬಿಡುತ್ತಿದೆ.

ಆದರೆ ಈ ಹೊಸ ಆಯ್ಕೆ ನಿಜಕ್ಕೂಏನು ಹೇಳುತ್ತಿದೆ?

1980ರಿಂದ 1999 ರ ತನಕ ಬಿಜೆಪಿ ಎಂದರೆ ಯಡಿಯೂರಪ್ಪ-ಶಿವಪ್ಪ-ಈಶ್ವರಪ್ಪ ಎಂಬ ತ್ರಿವಳಿ ನಾಯಕರೇ ಶ್ರಮಹಾಕಿ ಕರ್ನಾಟಕದಲ್ಲಿ ತಳಮಟ್ಟದಿಂದ ಪಕ್ಷವನ್ನು ಕಟ್ಟಿ, ಅದರ ಹೈಕಮಾಂಡ್ – ಲೋಕಮಾಂಡ್ ಎಲ್ಲವೂ ಆಗಿದ್ದರು. ಆ ಬಳಿಕ ಕೇಂದ್ರದಲ್ಲಿ ಹಂತಹಂತವಾಗಿ ಬಿಜೆಪಿ “ಹೈಕಮಾಂಡ್” ಬಲಗೊಳ್ಳುತ್ತಾ ಹೋದಾಗಲೆಲ್ಲ ಹೈಕಮಾಂಡ್ ಆಯ್ಕೆಯ ಅಧ್ಯಕ್ಷರು ಕರ್ನಾಟಕದಲ್ಲಿ ಬಂದದ್ದು ಕಾಣಿಸುತ್ತದೆ. 2000-2004ರ ನಡುವೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಇಲ್ಲಿ ಬಸವರಾಜ ಸೇಡಂ, ಅನಂತ್ ಕುಮಾರ್, ಜಗದೀಶ್ ಶೆಟ್ಟರ್ ಎಂದೆಲ್ಲ ಪ್ರಯೋಗಗಳು ನಡೆದವು. ಆದರೆ ಬಳಿಕ ಕೇಂದ್ರದಲ್ಲಿ ಹತ್ತು ವರ್ಷ UPA ಆಡಳಿತ ಇದ್ದಾಗ, ಮತ್ತೆ ಈಶ್ವರಪ್ಪ (2010-13) ಅವರೇ ಚುಕ್ಕಾಣಿ ಹಿಡಿಯಬೇಕಾಯಿತು. 2019 ರ ಬಳಿಕ ಮತ್ತೆ ಹೈಕಮಾಂಡ್ ಆಯ್ಕೆಯ ರೂಪದಲ್ಲಿ ನಳಿನ್ ಕುಮಾರ್ ಅಧ್ಯಕ್ಷತೆ ವಹಿಸಿಕೊಂಡರು.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಆಯ್ಕೆ

ಪಕ್ಷದಲ್ಲಿ ಹೈಕಮಾಂಡ್ ಬಲಿಷ್ಠ ಆಗಿರುವಾಗ ಅವರಿಗೆ ತಮ್ಮ ಪ್ರಯೋಗಗಳನ್ನು ನಡೆಸುವ ಆಯ್ಕೆಗೆ ಅವಕಾಶಗಳಿರುತ್ತವೆ. ಆದರೆ, ಹೈಕಮಾಂಡ್‌ಗೆ ತನ್ನ ಶಕ್ತಿಯ ಬಗ್ಗೆ ಸಂಶಯ ಇದ್ದಾಗ, “ಅನಿವಾರ್ಯ ಆಯ್ಕೆ”ಗಳತ್ತ ಅವರ ದೃಷ್ಟಿ ಹೊರಳುತ್ತದೆ ಎಂಬುದು ವಿಜಯೇಂದ್ರ ಅವರ ಆಯ್ಕೆಯಿಂದ ಖಚಿತವಾದಂತೆ ಕಾಣಿಸುತ್ತಿದೆ. ಹಾಗಾಗಿ ಇದು ಬಿಜೆಪಿ ಹೈಕಮಾಂಡಿಗೆ ಕರ್ನಾಟಕದಲ್ಲಿ ಡಿಪ್‌ಟೆಸ್ಟ್.

ಹಾಗಾದರೆ ಈ ಆಯ್ಕೆಯಿಂದ ಯಡಿಯೂರಪ್ಪ ಅವರ (ಅವರ ಕುಟುಂಬದ) ನಾಯಕತ್ವ ಕರ್ನಾಟಕದಲ್ಲಿ ಅನಿವಾರ್ಯ ಎಂದು ಸಾಬೀತಾದಂತಾಯಿತೆ?

ಈವತ್ತಿನ ಸ್ಥಿತಿಯಲ್ಲಿ, ದೇಶದಾದ್ಯಂತ ಸುಸಜ್ಜಿತವಾದ ಕೆಡೇರ್ ಬೇಸ್ ಹೊಂದಿರುವ ಬಿಜೆಪಿ ಮತ್ತು ಅವರ ಪರಿವಾರಕ್ಕೆ ಈ ಅಧ್ಯಕ್ಷ ಹುದ್ದೆ ರಾಜಕೀಯದ ಜಾತಿ ಸಮೀಕರಣಗಳ “ಬೋನಸ್” ಗಳಿಸಿಕೊಳ್ಳುವುದಕ್ಕೇ ಹೊರತು ಪಕ್ಷ ಕಟ್ಟುವುದಕ್ಕೆ ಅನಿವಾರ್ಯ ಅಲ್ಲ. ಹಾಗಾಗಿ ವಂಶ ಪಾರಂಪರ್ಯದ ಅಪವಾದ ಬಂದರೂ, ಅದರಿಂದ ತಾವು ಕಳೆದುಕೊಳ್ಳುವುದು ಏನಿಲ್ಲ ಎಂಬುದು ಪಕ್ಷಕ್ಕೆ ಖಚಿತವಿರುವಂತಿದೆ. ಆ ಧೈರ್ಯದ ಮೇಲೆಯೇ ಯಡಿಯೂರಪ್ಪ ಅವರ ಪುತ್ರನಿಗೆ ಪಟ್ಟಾಭಿಷೇಕ ಆಗಿದೆ. ವಿಜಯೇಂದ್ರ ಕೂಡ ಈವತ್ತಿನ ಬ್ರ್ಯಾಂಡ್ ರಾಜಕಾರಣಕ್ಕೆ ತಾನು ಸೂಕ್ತ ಎಂಬುದನ್ನು ಈಗಾಗಲೇ ಫಲಿತಾಂಶ ಸಹಿತ ಸಾಬೀತು ಮಾಡಿದ್ದಾರೆ. ಮೇಲಾಗಿ ಹೊಸ ತಲೆಮಾರಿನವರು. ಹಾಗಾಗಿ, ಈ ಆಯ್ಕೆಗೆ ಪಕ್ಷದೊಳಗೆ ಅಪಸ್ವರಗಳು ಏಳಲಾರವು.

ಕರ್ನಾಟಕದ ಮಟ್ಟಿಗೆ ಧರ್ಮ ಆಧರಿತ ರಾಜಕಾರಣಕ್ಕಿಂತ ಜಾತಿ ಆಧರಿತ ರಾಜಕಾರಣ ಹೆಚ್ಚು ಸಹ್ಯ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರ ಕುಟುಂಬದ ಪಾರಮ್ಯದಲ್ಲಿ ಮುಂದುವರಿಕೆ ಒಳ್ಳೆಯದೇ.

ವಿಡಿಯೋ ನೋಡಿ: ದುಡಿಯುವ ಜನರ ಮಹಾಧರಣಿ ನವೆಂಬರ್ 26 ರಿಂದ 28 Janashakthi Media

Donate Janashakthi Media

Leave a Reply

Your email address will not be published. Required fields are marked *